Suri Loves Sandhya: ‘ಸೂರಿ ಲವ್ಸ್ ಸಂಧ್ಯಾ’ ಚಿತ್ರದ ಪದೇ ಪದೇ ಹಾಡು ಬಿಡುಗಡೆ

ಅಭಿಮನ್ಯು ಕಾಶೀನಾಥ್ ಮತ್ತು ಅಪೂರ್ವ ನಾಯಕ-ನಾಯಕಿಯಾಗಿ ನಟಿಸಿರುವ ‘ಸೂರಿ ಲವ್ಸ್ ಸಂಧ್ಯಾ’ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್ 06ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿರುವ ಈ ಚಿತ್ರದ ʻಪದೇ ಪದೇʼ ಎಂಬ ಲವ್ ಬ್ರೇಕ್ ಅಪ್ ಸಾಂಗ್ ಶಿವರಾತ್ರಿ ದಿನ ರಿಲೀಸ್ ಆಗಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ.
ಈ ಹಾಡಿಗೆ ನಿರ್ದೇಶಕ ಯಾದವ್ ರಾಜ್ ಅವರೇ ಸಾಹಿತ್ಯ ಬರೆದಿದ್ದಾರೆ. ಎಸ್.ಎನ್. ಅರುಣಗಿರಿ ಸಂಗೀತ ಸಂಯೋಜಿಸಿದ್ದಾರೆ. ‘ಸೂರಿ ಲವ್ಸ್ ಸಂಧ್ಯಾ’ ಚಿತ್ರಕ್ಕೆ ಯಾದವ್ ರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಅಭಿಮನ್ಯು ಕಾಶೀನನಾಥ್, ಅಪೂರ್ವ, ಪ್ರತಾಪ್ ನಾರಾಯಣ್, ಪ್ರದೀಪ್ ಕಾಬ್ರಾ, ಭಜರಂಗಿ ಪ್ರಸನ್ನ, ಖುಷಿ ಆಚಾರ್ ಮುಂತಾದವರು ನಟಿಸಿದ್ದಾರೆ. ಎಸ್.ಎನ್. ಅರುಣಗಿರಿ ಸಂಗೀತ ಸಂಯೋಜಿಸಿದ್ದು, ಶ್ರೀನಿವಾಸ್ ಛಾಯಾಗ್ರಹಣವಿದೆ.
ಟ್ರೇಲರ್ ಬಿಡುಗಡೆ ಮಾಡಿದ್ದ ಉಪೇಂದ್ರ, ‘ಇಂದು ನಾನು ಹೃದಯ ತುಂಬಿ ಮಾತನಾಡುತ್ತಿದ್ದೇನೆ. ಇಂಥ ತಂಡದೊಂದಿಗೆ ನಿಲ್ಲುವುದಕ್ಕೆ ಹೆಮ್ಮೆಪಡುತ್ತೇನೆ. ಏಕೆಂದರೆ, ಈ ಚಿತ್ರವನ್ನು ನಾನು ನೋಡಿ ಮಾತನಾಡುತ್ತಿದ್ದೇನೆ. ನಾಯಕ-ನಾಯಕಿ ಇಬ್ಬರೂ ಚೆನ್ನಾಗಿ ನಟಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿ ತಂದೆ ಕಾಶೀನಾಥ್ ಇರಬೇಕಿತ್ತು. ಈ ಚಿತ್ರ ನೋಡಬೇಕಿತ್ತು. ತುಂಬಾ ಖುಷಿಪಟ್ಟಿರುತ್ತಿದ್ದರು. ಅವರೀಗ ನಮ್ಮ ಜೊತೆಗೆ ಇಲ್ಲದಿದ್ದರೂ ಅವರ ಆಶೀರ್ವಾದ ಸದಾ ಜೊತೆಗಿರುತ್ತದೆ. ಈ ಚಿತ್ರದ ಕ್ಲೈಮ್ಯಾಕ್ಸ್ ನೋಡಬೇಕು. ಹೃದಯ ಕಿತ್ತುಕೊಂಡು ಬರುವಷ್ಟು ಫೀಲ್ ಆಗುತ್ತದೆ. ಕೊನೆಯ 20 ನಿಮಿಷಗಳು ನಾಯಕ-ನಾಯಕಿ ಇಬ್ಬರೂ ಬಹಳ ಚೆನ್ನಾಗಿ ನಟಿಸಿದ್ದಾರೆ. ಛಾಯಾಗ್ರಹಣ, ಮೇಕಿಂಗ್ ಎಲ್ಲವೂ ಚೆನ್ನಾಗಿದೆ. ಈ ಚಿತ್ರವನ್ನು ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡಿ. ಏಕೆಂದರೆ, ಇಂಥ ಸಿನಿಮಾಗಳನ್ನು ಪ್ರೋತ್ಸಾಹಿಸಬೇಕು’ ಎಂದಿದ್ದರು.