Love OTP: ‘ಲವ್ OTP’ಗಾಗಿ ಕಾಯುತ್ತಿದ್ದಾರೆ ಅನೀಶ್ ತೇಜೇಶ್ವರ್

ಅನೀಶ್ ತೇಜೇಶ್ವರ್ ಹೊಸ ಚಿತ್ರವೊಂದರಲ್ಲಿ ನಟಿಸುವುದರ ಜೊತೆಗೆ, ಆ ಚಿತ್ರವನ್ನು ನಿರ್ದೇಶಿಸುತ್ತಾರೆ ಎಂಬ ವಿಷಯವೊಂದು ಕೆಲವು ದಿನಗಳ ಹಿಂದಷ್ಟೇ ಬಂದಿತ್ತು. ಅಷ್ಟೇ ಅಲ್ಲ, ಪೋಸ್ಟರ್ ಸಹ ಬಿಡುಗಡೆಯಾಗಿತ್ತು. ಆದರೆ, ಚಿತ್ರದ ಶೀರ್ಷಿಕೆ ಏನು ಎಂಬುದನ್ನು ಅನೀಶ್ ಬಿಟ್ಟುಕೊಟ್ಟಿರಲಿಲ್ಲ. ಸದ್ಯದಲ್ಲೇ ತಿಳಿಸುವುದಾಗಿ ಅವರು ಹೇಳಿದ್ದರು.
ಈಗ ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಅಧಿಕೃತವಾಗಿ ಘೋಷಿಸಲಾಗಿದೆ. ಚಿತ್ರಕ್ಕೆ ‘ಲವ್ OTP’ ಎಂಬ ಹೆಸರನ್ನು ಇಡಲಾಗಿದೆ. OTP ಎಂದರೆ One Time Password ಅಂತ ಮೊಬೈಲ್ ಬಳಕೆ ಮಾಡುವವರಿಗೆ ಸಹಜವಾಗಿಯೇ ಗೊತ್ತಿರುತ್ತದೆ. ಇಲ್ಲಿ OTP ಎಂದರೇನು ಎಂಬ ಪ್ರಶ್ನೆ ಸಹಜ. ಚಿತ್ರಕ್ಕೆ Over Torture Pressure ಎಂಬ ಅಡಿಬರಹವಿದ್ದು, ಪ್ರೀತಿಯಲ್ಲಿ ಬಿದ್ದರೆ ಎಷ್ಟು ಒತ್ತಡ ಮತ್ತು ಹಿಂಸೆಯನ್ನು ಅನುಭವಿಸಬೇಕಾಗುತ್ತದೆ ಎಂದು ಶೀರ್ಷಿಕೆಯ ಮೂಲಕವೇ ಸೂಕ್ಷ್ಮವಾಗಿ ಹೇಳಲಾಗಿದೆ.

ಭಾವಪ್ರೀತ ಪ್ರೊಡಕ್ಷನ್ಸ್ ಸಂಸ್ಥೆಯಡಿ ಈ ಚಿತ್ರವನ್ನು ವಿಜಯ್ ಎಂ. ರೆಡ್ಡಿ ನಿರ್ಮಿಸುತ್ತಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಚಿತ್ರಕ್ಕೆ ಆನಂದ್ ರಾಜವಿಕ್ರಮ್ ಸಂಗೀತ ಮತ್ತು ಹರ್ಷವರ್ಧನ್ ಅವರ ಛಾಯಾಗ್ರಹಣವಿದೆ. ಚಿತ್ರಕ್ಕೆ ಅನೀಶ್ ಚಿತ್ರಕಥೆಯನ್ನು ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಅನೀಶ್ ಚಿತ್ರ ನಿರ್ದೇಶನ ಮಾಡುತ್ತಿರುವುದು ಮೊದಲೇನಲ್ಲ. 2021ರಲ್ಲಿ ಬಿಡುಗಡೆಯಾದ ‘ರಾಮಾರ್ಜುನ’ ಎಂಬ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ, ಆ ಚಿತ್ರವನ್ನು ನಿರ್ಮಿಸಿ, ಅದರಲ್ಲಿ ನಾಯಕನಾಗಿಯೂ ಕಾಣಿಸಿಕೊಂಡಿದ್ದರು. ಈಗ ಹೊಸ ಚಿತ್ರದಲ್ಲಿ ಅವರು ನಟನೆ ಮತ್ತು ನಿರ್ದೇಶನ ಎರಡೂ ಜವಾಬ್ದಾರಿಗಳನ್ನು ಹೊತ್ತಿದ್ದಾರೆ. ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ ಎಂಬ ವಿಷಯ ಇನ್ನಷ್ಟೇ ಹೊರಬೀಳಬೇಕಿದೆ.
