Vinodh Rajkumar; ಲೀಲಾವತಿ ಸ್ಮಾರಕ ಭವನದಲ್ಲಿ ‘ಶಾಲೆ’ ಪ್ರಾರಂಭ

ಕಳೆದ ತಿಂಗಳು ನಟಿ ಲೀಲಾವತಿ ಅವರ ಸ್ಮಾರಕ ಉದ್ಘಾಟನೆಯಾಗಿದ್ದು ನೆನಪಿರಬಹುದು. ಸೋಲದೇವನಹಳ್ಳಿಯ ತಮ್ಮ ಜಮೀನಿನಲ್ಲಿ ತಾಯಿಯ ಸ್ಮಾರಣಾರ್ಥ ಈ ಸ್ಮಾರಕವನ್ನು ವಿನೋದ್ ರಾಜ್‍ ಕಟ್ಟಿಸಿದ್ದಾರೆ. ಈಗ ಡಾ. ಲೀಲಾವತಿ ಸ್ಮಾರಕ ಭವನದಲ್ಲಿ ಸದ್ದಿಲ್ಲದೆ ಒಂದು ಚಿತ್ರದ ಮುಹೂರ್ತ ನೆರವೇರಿದೆ. ಅದೇ ‘ಶಾಲೆ’.

ಶ್ರೀ ಕನ್ನಡಾಂಬೆ ಮೂವೀಸ್ ಬ್ಯಾನರ್ ಅಡಿಯಲ್ಲಿ ಮಂಜುನಾಥ್ ಬಿ.ಆರ್ ನಿರ್ದೇಶಿಸುತ್ತಿರುವ, ನಾಗು ಶ್ರೀ ಎಸ್.ಎನ್. ನಿರ್ಮಾಣದ ಚಿತ್ರ ‘ಶಾಲೆ’. ಈ ಚಿತ್ರದ ಮುಹೂರ್ತ ಲೀಲಾವತಿ ಸ್ಮಾರಕದಲ್ಲಿ ನಡೆದಿದ್ದು, ಚಿತ್ರದ ಮೊದಲ ದೃಶ್ಯಕ್ಕೆ ವಿನೋದ್ ರಾಜ್‍ ಕ್ಲಾಪ್ ಮಾಡಿ ಚಾಲನೆ ನೀಡಿದ್ದಾರೆ.

ಸಿನಿಮಾಗಳಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ಪ್ರಯತ್ನಗಳು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಲೇ ಇದೆ. ಈ ಸಾಲಿಗೆ ಇದೀಗ ‘ಶಾಲೆ’ ಸಹ ಹೊಸದಾಗಿ ಸೇರ್ಪಡೆಯಾಗಿದೆ. ಹೆಸರೇ ಹೇಳುವಂತೆ ಇದು ಶಾಲೆಯ ಸುತ್ತ ಸುತ್ತುವ ಚಿತ್ರ. ಅದರಲ್ಲೂ ಸರ್ಕಾರಿ ಶಾಲೆಗಳನ್ನು ಆ ಶಾಲೆಯ ಮಕ್ಕಳೇ ಹೋರಾಟ ಮಾಡಿ ಉಳಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುತ್ತಿದೆ.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಮಂಜುನಾಥ್ ಬಿ.ಆರ್‍, ‘ಇತ್ತೀಚಿನ ದಿನಗಳಲ್ಲಿ ಬಹುತೇಕ ಸರ್ಕಾರಿ ಶಾಲೆಗಳು ಅಳಿವಿನಂಚಿನಲ್ಲಿವೆ. ಮೂವರು ಹುಡುಗರು ಅಂಥ ಸರ್ಕಾರಿ ಶಾಲೆಗಳನ್ನು ಮತ್ತೆ ತೆರೆಸುವ ನಿಟ್ಟಿನಲ್ಲಿ ನಡೆಸುವ ಪ್ರಯತ್ನ ಹಾಗೂ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಲು ಪಣತೊಟ್ಟು ಹೋರಾಡುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ’ ಎಂದರು.

‘ಶಾಲೆ’ ಚಿತ್ರದಲ್ಲಿ ರಮೇಶ್ ಭಟ್, ಶಂಕರ್ ಅಶ್ವಥ್, ಮೀಸೆ ಅಂಜನಪ್ಪರಂತಹ ಹಿರಿಯ ನಟರ ಜೊತೆಗೆ ಬಾಲ ಕಲಾವಿದರಾದ ಅಕ್ಷಿತ್, ಪಲ್ಲವಿ, ಯೋಗೀಶ್, ಜೀವಾ ಮುಂತಾದವರು ನಟಿಸುತ್ತಿದ್ದಾರೆ.

ಕೋಲಾರ, ಮಾಲೂರು, ಚಿಕ್ಕಮಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಯಲಿದೆ.

Leave a Reply

Your email address will not be published. Required fields are marked *