C. M. Siddaramaiah; ‘I Am god’ ಎಂದ ರವಿ ಗೌಡಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲ

 ಮುಖ್ಯಮಂತ್ರಿ ಸಿದ್ದರಾಮಯ್ಯ(C. M Siddaramaiah) ಸಿನಿಮಾ ಸಮಾರಂಭಗಳಿಗೆ ಬರುವುದು ಕಡಿಮೆಯೇ. ಇದೀಗ ಅವರು ತಮ್ಮ ಆಪ್ತರೊಬ್ಬರ ಸಿನಿಮಾ ಸಮಾರಂಭದಲ್ಲಿ ಭಾಗವಹಿಸಿ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

 ಸಿದ್ದರಾಮಯ್ಯ ಅವರ ಆತ್ಮೀಯ ಗೆಳೆಯರಾದ ಮುಡಾ ಮಾಜಿ ಅಧ್ಯಕ್ಷ ಸಿ. ಬಸವೇಗೌಡ (C. Basavegouda) ಅವರ ಮಗನ ಹೊಸ ಪಯಣಕ್ಕೆ ಶುಭಾಶಯ ಕೋರಿದ್ದಾರೆ. ಈ ಹಿಂದೆ ‘ಧ್ವಜ’ ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದ ರವಿ ಗೌಡ, ‘I Am god’ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುವುದಷ್ಟೇ ಅಲ್ಲ, ಆ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ.

 ಇತ್ತೀಚೆಗೆ, ‘I Am god’ ಚಿತ್ರದ ಶೀರ್ಷಿಕೆ ಹಾಗೂ ಮೊದಲ ನೋಟವನ್ನು ಸಿದ್ದರಾಮಯ್ಯ, ಮೈಸೂರಿನಲ್ಲಿ ಅನಾವರಣ ಮಾಡಿ ರವಿ ಮತ್ತು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

 ಈ ಸಂದರ್ಭದಲ್ಲಿ ಮಾತನಾಡಿರುವ ಸಿದ್ದರಾಮಯ್ಯ, ‘ರವಿ ಗೌಡ (Ravi Gouda) ಹುಟ್ಟುವ ಮುಂಚೆಯೇ ಬಸವೇಗೌಡ ನನಗೆ ಪರಿಚಯ. ಬಸವೇಗೌಡರ ಮಗ ಸಿನಿಮಾದಲ್ಲಿ ನಟಿಸುತ್ತಾನೆ, ನಿರ್ಮಾಪಕ ಆಗುತ್ತಾನೆ, ನಿರ್ದೇಶನ ಮಾಡುತ್ತಾನೆ ಅಂತ ನಾನು ಅಂದುಕೊಂಡಿರಲಿಲ್ಲ. ದುಡ್ಡಿದ್ದರರೆ ಯಾರು ಬೇಕಾದರೂ ನಿರ್ಮಾಪಕರು ಆಗಬಹುದು. ಆದರೆ ನಟನೆ, ನಿರ್ದೇಶಕರಾಗುವುದು ರಕ್ತದಲ್ಲಿ ಬಂದಾಗ ಮಾತ್ರ ಸಾಧ್ಯವಾಗುವುದು. ಬಸವೇಗೌಡ ಮಗ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿರುವುದು ಸಂತಸ‌. ಈ ಕ್ಷೇತ್ರದಲ್ಲಿ ಪ್ರಬುದ್ಧವಾಗಿ ಬೆಳೆಯಬೇಕು ಎಂದು ಆಶಿಸುತ್ತೇನೆ. ನಾನು ಸಿನಿಮಾ ನೋಡುತ್ತೇನೆ. ಸಿನಿಮಾ ಕ್ಷೇತ್ರದಲ್ಲಿ ದೊಡ್ಡದಾಗಿ ಬೆಳೆಯಲಿ’ ಎಂದು ಶುಭ ಹಾರೈಸಿದರು.

 ‘I Am god’ ಒಂದು ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರವಾಗಿದ್ದು, ಈಗಾಗಲೇ ಸದ್ದಿಲ್ಲದೆ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಹಾಗೂ ಕೇರಳದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಸಿಬಿಜಿ ಪ್ರೊಡಕ್ಷನ್ಸ್ ನಡಿ ಮೂಡಿಬರುತ್ತಿರುವ ‘I Am god’ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ಜಿತಿನ್‍ ದಾಸ್‍ ಛಾಯಾಗ್ರಹಣವಿದೆ.

Leave a Reply

Your email address will not be published. Required fields are marked *