BIFFes-2025; ಸಂವಿಧಾನಿಕ ಮೌಲ್ಯಗಳನ್ನು ಕಾಪಾಡಲು ಕಲೆಯಿಂದ ಮಾತ್ರ ಸಾಧ್ಯ: ಕಿಶೋರ್‌

ಬೆಂಗಳೂರು: ಸತ್ತಂತಿಹರಲು ಬಡಿದೆಚ್ಚರಿಸು.. ಎಂಬ ಕುವೆಂಪು ಕವಿವಾಣಿಯಿಂದ ಚಲನಚಿತ್ರೋತ್ಸವದ ರಾಯಭಾರಿ ಕಿಶೋರ್‌ ಮಾತನ್ನು ಆರಂಭಿಸಿದರು. ನನ್ನ ಪ್ರಕಾರ ಜನರ ದನಿಯಾಗದ ಕಲೆ ಸಂಪೂರ್ಣವಲ್ಲ, ಅರ್ಥಪೂರ್ಣವೂ ಅಲ್ಲ. ಸರ್ವಜನಾಂಗದ ಶಾಂತಿಯ ತೋಟ ಎಂಬ ಚಿತ್ರೋತ್ಸವದ ಅಡಿ ಬರಹ ಹತ್ತು ಹಲವು ಭಾಷೆ ಸಂಸ್ಕೃತಿಯ ಸಿನಿಮಾ ಇಲ್ಲಿ ಪ್ರದರ್ಶನ ಆಗುತ್ತಿರುವ ಹಬ್ಬದ ಆಶಯವನ್ನು ಹೇಳುತ್ತದೆ. ವೈವಿಧ್ಯತೆಯ ನಡುವೆ ಸಕಲ ಜೀವಿಗಳಲ್ಲಿ ಸೌಹಾರ್ಧ, ಶಾಂತಿ ಮತ್ತು ಪ್ರೀತಿಯಿಂದ ಬದುಕುತ್ತಿರುವ ಎಷ್ಟು ಉದಾಹರಣೆಗಳು ನಮಗೆ ಸಿಗುತ್ತದೆ. ಕೇವಲ ಬೆರಳೆಣಿಕೆಯಷ್ಟು ಅಷ್ಟೇ, ಅಂತಹ ಬೆರಳೆಣಿಕೆಯಲ್ಲಿ ನಮ್ಮ ನಾಡು ಕೂಡ ಒಂದು. ಈ ಶೀರ್ಷಿಕೆಯ ಆಚರಣೆ ಎಷ್ಟು ಮುಖ್ಯವೂ, ಅಷ್ಟೇ ಈ ಮೌಲ್ಯವನ್ನು ಸಾರುವುದು ಆಗಿದೆ ಎಂದು 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (16th Bengaluru International Film Festival (BIFFes)) ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.

ಮುಂದುವರೆದು ಮಾತನಾಡಿದ ಅವರು, ಈ ವಚನ ಚಳವಳಿಕಾರರು ಅರಮನೆಯ ಜೀತದಿಂದ ಜನರ ಮಧ್ಯೆ ತಂದಂತಹ ಈ ಸಾಹಿತ್ಯ ಮತ್ತು ಕಲೆಯನ್ನ, ಕಳೆದ ವರ್ಷಗಳಲ್ಲಿ ನಾವು ಮತ್ತೆ ಅರಮನೆ ಬಂಧಿಯನ್ನಾಗಿಸುವ ಪ್ರಯತ್ನವನ್ನ ಕಾಣಬಹುದು. ಪಟ್ಟಭದ್ರ ಹಿತಾಸಕ್ತಿಗಳು ಪ್ರಜಾಪ್ರಭುತ್ವದ ಎಲ್ಲಾ ಸ್ತಂಭಗಳನ್ನು ತಮ್ಮ ಹಿಡಿತಕ್ಕೆ ತಂದಿಟ್ಟಕೊಂಡು, ಅವುಗಳ ಮೂಲ ಸಂವಿಧಾನಿಕ ಉದ್ದೇಶವನ್ನ, ಸಮಾಜದ ಸ್ವಾಸ್ಥ್ಯವನ್ನ ನಾಶಮಾಡುವ ದಬ್ಬಾಳಿಕೆಯ ರಾಜಕಾರಣ ಮಾಡುವಾಗ. ಇನ್ನೊಂದೆಡೆ ಪ್ರೊಪಗ್ಯಾಂಡ ಸಿನಿಮಾಗಳ ಮೂಲಕ ಟಿವಿ ಮತ್ತಿತರ ಸಮೂಹ ಮಾಧ್ಯಮಗಳ ಮೂಲಕ ಇತಿಹಾಸ ತಿರುಚುವಂತಹ, ಸುಳ್ಳನ್ನು ಹರಡುವಂತಹ, ದ್ವೇಷವನ್ನು ಹರಡಿ ಅದರ ಲಾಭ ಪಡೆಯುವಂತಹ, ಸಂವಿಧಾನದ ಮೂಲ ತತ್ವವಾದ ಭ್ರಾತೃತ್ವ, ಸಮಾನತೆಯನ್ನ ನಾಶಮಾಡುವ ಒಡೆದು ಆಳುವ ರಾಜಕಾರಣವನ್ನು ಕಾಣುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಈ ಆಕ್ರಮಗಳ ವಿರುದ್ಧ ನಿಂತು ಸಂವಿಧಾನಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವುದಕ್ಕೆ ಕಲೆಯಿಂದ ಮಾತ್ರ ಸಾಧ್ಯ. ಸಿನಿಮಾದಂತ ಮಾಧ್ಯಗಳಿಂದ, ಚಿತ್ರೋತ್ಸವಗಳಿಂದ ಸಾಧ್ಯ. ಆದರೆ ಇಂದಿನ ಬದಲಾದ ಜೀವನ ಶೈಲಿ ಮಾರುಕಟ್ಟೆಯ ಒತ್ತಡದಿಂದ ಗುಣಮಟ್ಟದ ದೃಷ್ಟಿಯಲ್ಲಿ ನಲುಗುತ್ತಿದೆ. ಇದು ಜನರ ಮಾಧ್ಯಮ ಆದ್ದರಿಂದ ಇದಕ್ಕೆ ಉತ್ತರವೂ ಜನರಲ್ಲೇ ಇದೆ. ಪ್ರೇಕ್ಷಕ ಜಾಗೃತನಾದರೆ ಇವೆಲ್ಲವನ್ನೂ ಸರಿಪಡಿಸಲು ಸಾಧ್ಯ. ಜಾಗೃತ ಪ್ರೇಕ್ಷಕ ಸಿನಿಮಾವನ್ನು ಅರ್ಥಪೂರ್ಣಗೊಳಿಸಲು ಸಾಧ್ಯ. ಗ್ರಾಹಕ ಎಚ್ಚೆತ್ತುಕೊಂಡರೆ ಉತ್ಪಾದನೆಯ ಗುಣಮಟ್ಟಕೂಡ ಹೆಚ್ಚುತ್ತದೆ ಎಂದರು.

ಇದೇ ವೇಳೆ ಸರ್ಕಾರದ ಮುಂದೆ ನಟ ಕಿಶೋರ್‌ ಒಂದು ಮನವಿಯನ್ನೂ ಇಟ್ಟರು. ಯುವ ಪ್ರೇಕ್ಷಕರು ಜಾಗೃತರಾಗಲು ಸಿನಿಮಾವನ್ನು ನೋಡುವ ಹವ್ಯಾಸ ಬೆಳಸ ಬೇಕು ಈ ಕಾರಣಕ್ಕಾಗಿ, ಘನ ಸರ್ಕಾರ ಪ್ರಾಥಮಿಕ ಶಾಲೆಯಿಂದಲೇ ಪಠ್ಯಗಳಲ್ಲಿ ಸಿನಿಮಾ ಒಂದು ವಿಷಯವಾಗಿ ಸೇರಿಸಬೇಕು ಎಂದರು.

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಮಾತನಾಡಿ, ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮನೆಯ ಹಬ್ಬದ ರೀತಿ. ಪ್ರತೀ ವರ್ಷ ಇದರ ಆಚರಣೆ ಸಂತೋಷ ಕೊಡುತ್ತದೆ. ಆನಾರೋಗ್ಯದಿಂದ ನಾನು ಇತ್ತೀಚೆಗಷ್ಟೇ ಚೇತರಿಸಿಕೊಂಡೆ. ನಿಮ್ಮ ಪ್ರಾರ್ಥನೆ ನಾನು ಧನ್ಯವಾದ ಹೇಳುತ್ತೇನೆ. ಮುಂದಿನ ವಾರದಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತೇನೆ. ನಿಮ್ಮ ಬೆಂಬಲ, ಪ್ರೀತಿ ಹೀಗೆ ಇರಲಿ ಎಂದರು.

Leave a Reply

Your email address will not be published. Required fields are marked *