Bengaluru International Film Festival (BIFFes); ಮಿಕ್ಕ ಬಣ್ಣದ ಹಕ್ಕಿ ಅತ್ಯುತ್ತಮ ಚಿತ್ರ; ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ತೆರೆ

16ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ (Bengaluru International Film Festival (BIFFes)) ದಲ್ಲಿ ಮನೋಹರ ಕೆ. ನಿರ್ದೇಶನದ, ಪೃಥ್ವಿ ಕೊಣನೂರು ನಿರ್ಮಿಸಿದ ‘ಮಿಕ್ಕ ಬಣ್ಣದ ಹಕ್ಕಿ’ಸಿನಿಮಾ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ತುಳು ಚಿತ್ರಗಳಾದ ಸಂತೋಷ್ ಮಾಡ ನಿರ್ದೇಶನದ, ಸುರೇಶ್ ಕೆ. ನಿರ್ಮಾಣದ ‘ಪಿದಾಯಿ’ ಹಾಗೂ ಅನೀಶ್ ಪೂಜಾರಿ ನಿರ್ದೇಶನದ, ರಾಘವೇಂದ್ರ ಕೆ. ನಿರ್ಮಾಣದ ‘ದಸ್ಕತ್’ ಸಿನಿಮಾಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದವು.
ಪ್ರಶಸ್ತಿ ಗೆದ್ದ ಸಿನಿಮಾಗಳಿಗೆ ಕ್ರಮವಾಗಿ ₹10, ₹5 ಹಾಗೂ ₹2 ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಕೃಷ್ಣೇಗೌಡ ಅವರು ನಿರ್ದೇಶಿಸಿದ ‘ಲಚ್ಚಿ’ ಜ್ಯೂರಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಒಟ್ಟು ಹದಿನಾಲ್ಕು ಸಿನಿಮಾಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಅವುಗಳಲ್ಲಿ ಎರಡು ತುಳು ಸಿನಿಮಾಗಳು ಪ್ರಶಸ್ತಿ ಪಡೆದಿರುವುದು.
ವಾರ್ತಾ ಇಲಾಖೆಯ ಸುಲೋಚನಾ ಸಭಾಂಗಣದಲ್ಲಿ ಶನಿವಾರ ನಡೆದ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್, ನಟಿ ಅರುಂಧತಿ ನಾಗ್, ನಟ, ಚಿತ್ರೋತ್ಸವದ ರಾಯಭಾರಿ ಕಿಶೋರ್ ಕುಮಾರ್ ಜಿ. ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.
ಭಾರತೀಯ ಚಿತ್ರಗಳನ್ನು ಪ್ರತಿನಿಧಿಸುವ ‘ಚಿತ್ರಭಾರತಿ’ ಸ್ಪರ್ಧಾ ವಿಭಾಗದಲ್ಲಿ ಅರಣ್ಯ ಸಹಾಯ್ ನಿರ್ದೇಶನದ ‘ಹ್ಯೂಮನ್ಸ್ ಇನ್ ದಿ ಲೂಪ್’ ಹಿಂದಿ ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ಅರ್ಫಾಜ್ ಅಯುಬ್ ನಿರ್ದೇಶನದ ಮಲಯಾಳ ಸಿನಿಮಾ ‘ಲೆವೆಲ್ ಕ್ರಾಸ್’ ದ್ವಿತೀಯ ಹಾಗೂ ಅಭಿಲಾಷ್ ಶರ್ಮಾ ನಿರ್ದೇಶನದ ಮಗಹೀ ಭಾಷೆಯ ಸಿನಿಮಾ ‘ಸ್ವಾಹ’ ತೃತೀಯ ಅತ್ಯುತ್ತಮ ಚಿತ್ರ ಬಹುಮಾನ ಪಡೆಯಿತು. ‘ಏಷಿಯನ್ ಸಿನಿಮಾ’ ಸ್ಪರ್ಧಾ ವಿಭಾಗದಲ್ಲಿ ರಾಹಾ ಆಮೀರ್‌ಫಾಝ್ಲಿ ಹಾಗೂ ಅಲಿರೆಝಾ ಘಸೆಮಿ ನಿರ್ದೇಶನದ ‘ಇನ್ ದಿ ಲ್ಯಾಂಡ್ ಆಫ್ ಬ್ರದರ್ಸ್’ ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ಎರಾನ್ ರಿಕ್ಲಿಸ್ ನಿರ್ದೇಶನದ ‘ರೀಡಿಂಗ್ ಲೊಲಿಟ ಇನ್ ಟೆಹ್ರಾನ್’ ಚಿತ್ರ ಹಾಗೂ ಮಕ್‌ಸುದ್ ಹುಸೈನ್ ನಿರ್ದೇಶನದ ‘ಸಭಾ’ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದವು.
ಬಹುಭಾಷಾ ನಟಿ ಶಬಾನಾ ಆಜ್ಮಿ ಅವರು ಈ ವರ್ಷದ ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾದರು. ಅವರ ಪರವಾಗಿ ನಟಿ ಅರುಂಧತಿ ನಾಗ್ ಪ್ರಶಸ್ತಿ ಸ್ವೀಕರಿಸಿದರು. 70ರ ದಶಕದಲ್ಲಿ ‘ಕನ್ನೇಶ್ವರ ರಾಮ’ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದ ಶಬಾನಾ ಅವರು ದಕ್ಷಿಣ ಭಾರತದ ಚಿತ್ರಗಳು ಹಾಗೂ ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರೋತ್ಸವದ ರಾಯಭಾರಿ ಕಿಶೋರ್ ಮಾತನಾಡಿ “ರಾಜ್‌ಕುಮಾರ್ ಅವರ ಹೆಸರು ಕೇವಲ ಚಪ್ಪಾಳೆಗಷ್ಟೇ ಸೀಮಿತವಾಗುತ್ತಿದೆ. ಅವರ ಆದರ್ಶಗಳನ್ನು ನೋಡಬೇಕಿದೆ. ‘ಬೇಡರ ಕಣ್ಣಪ್ಪ’ ದೇವರಿಗೆ ತನ್ನ ಆಹಾರವಾದ ಮಾಂಸ ಕೊಟ್ಟವನು. ಭಕ್ತಿಯನ್ನು ಹೇಳುತ್ತಲೇ ಧರ್ಮದ ಸರಿ ತಪ್ಪುಗಳನ್ನು ಕಣ್ಣಪ್ಪ ಒರೆಗೆ ಹಚ್ಚಿ, ಕಟ್ಟಾ ಸಂಪ್ರದಾಯಸ್ತರು ಸ್ವಇಚ್ಛೆಯಿಂದ ಇವನು ಸರಿ ಅನ್ನುವ ರೀತಿ ಸಮಾನತೆಗೆ ಮುಖ ಮಾಡಲು ದೂಡಿದ ನಾಯಕ ಕಣ್ಣಪ್ಪ. ‘ಮಾಂಸ ತಿಂದು ನಾನು ದೇವಸ್ಥಾನಕ್ಕೆ ಹೋಗುತ್ತೇನೆ. ಏನು ತಪ್ಪು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಟ್ಟಿತನದ ಹೇಳಿಕೆ ನೀಡಿದ್ದರು. ಸತ್ಯವನ್ನು ಧೈರ್ಯವಾಗಿ ಹೇಳುವುದಕ್ಕೆ, ನಮ್ಮ ಮೂಢನಂಬಿಕೆಗಳನ್ನು ಒರೆಗೆ ಹಚ್ಚಿ ತಿದ್ದುವುದಕ್ಕೆ ಈ ಥರದ ನಾಯಕರು ತುಂಬಾ ಅವಶ್ಯಕ”
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಬಿ.ಬಿ.ಕಾವೇರಿ, ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್ ಉಪಸ್ಥಿತರಿದ್ದರು.
(16th Bengaluru International Film Festival (BIFFes) came to an end on Saturday. Mikka Bannada Hakki, directed by Manohara K., emerged as the best Kannada film of the festival.Veteran actor Shabana Azmi, who recently completed 50 years in the film industry, was honoured with the Lifetime Achievement Award.)