ಹೊಸ ವರ್ಷಕ್ಕೆ ಗಣೇಶ್ ಅಭಿನಯದ ಹೊಸ ಚಿತ್ರದ ಟೀಸರ್…

ಗಣೇಶ್ ಅಭಿನಯದ ಹಿಂದಿನ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನೂ ಯಶಸ್ವಿಯಾಗಿರಲಿಲ್ಲ. ಹೀಗಿರುವಾಗಲೇ, ಈ ವರ್ಷ ಬಿಡುಗಡೆಯಾದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರವು ನಾಲ್ಕು ಕೇಂದ್ರಗಳಲ್ಲಿ 100 ದಿನಗಳನ್ನು ಪೂರೈಸಿದೆ. ಬಹಳ ದಿನಗಳ ನಂತರ ಕನ್ನಡ ಚಿತ್ರವೊಂದು 100 ದಿನ ಪೂರೈಸಿದ ಹೆಗ್ಗಳಿಕೆ ಪಾತ್ರವಾಗಿದೆ.
ಈ ಮಧ್ಯೆ, ಗಣೇಶ್ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಈ ಚಿತ್ರದ ಟೀಸರ್ ಹೊಸ ವರ್ಷದ ಸಂದರ್ಭದಲ್ಲಿ 2025ರ ಜನವರಿ ಎರಡರಂದು ಬಿಡುಗಡೆಯಾಗಲಿದೆ. ಅಂದು ಚಿತ್ರದ ಶೀರ್ಷಿಕೆಯನ್ನು ಟೀಸರ್ ಮೂಲಕ ಅಧಿಕೃತವಾಗಿ ಘೋಷಿಸಲಾಗುತ್ತದೆ.
ವಿಶೇಷವೆಂದರೆ, ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಜೊತೆಗೆ ಗಣೇಶ್ ಕೈ ಜೋಡಿಸಿದ್ದಾರೆ. ಈ ಸಂಸ್ಥೆ ನಿರ್ಮಾಣ ಮಾಡಲಿರುವ ತನ್ನ 49ನೇ ಚಿತ್ರದಲ್ಲಿ ನಾಯಕನಾಗಿ ಗಣೇಶ್ ನಟಿಸಲಿದ್ದಾರೆ. ಸದ್ಯಕ್ಕೆ ಚಿತ್ರಕ್ಕೆ #PMF49 ಎಂದು ಕರೆಯಲಾಗುತ್ತಿದ್ದು, ಜನವರಿ ಎರಡರಂದು ಶೀರ್ಷಿಕೆ ಹೊರಬೀಳಲಿದೆ.

ಇದು ಈ ಸಂಸ್ಥೆ ಕನ್ನಡದಲ್ಲಿ ನಿರ್ಮಿಸುತ್ತಿರುವ ಎರಡನೆಯ ಚಿತ್ರವಾಗಿದ್ದು, ಕೆಲವೇ ದಿನಗಳ ಹಿಂದೆ ಶ್ರೀಮುರಳಿ ಅಭಿನಯದಲ್ಲಿ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯಿಂದ ಹೊಸ ಚಿತ್ರವೊಂದು ಘೋಷಣೆಯಾಗಿತ್ತು.
ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯು ತೆಲುಗಿನಲ್ಲಿ ಇದಕ್ಕೂ ಮೊದಲು ‘ಕಾರ್ತಿಕೇಯ 2’, ‘ವೆಂಕಿ ಮಾಮಾ’, ‘ಓ ಬೇಬಿ’, ‘ಧಮಾಕಾ’ ಮುಂತಾದ ಯಶಸ್ವಿ ಮತ್ತು ಜನಪ್ರಿಯ ಚಿತ್ರಗಳನ್ನು ನಿರ್ಮಾಣ ಮಾಡಿದೆ. ಈಗ ಸಂಸ್ಥೆಯು ಕನ್ನಡಕ್ಕೆ ಕಾಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಒಂದಿಷ್ಟು ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದೆ. ಮೊದಲ ಹಂತವಾಗಿ ಶ್ರೀಮುರಳಿ ಮತ್ತು ಗಣೇಶ್ ಅಭಿನಯದ ಚಿತ್ರಗಳನ್ನು ನಿರ್ಮಿಸುತ್ತಿದೆ.
ಈ ಚಿತ್ರದ ಮೂಲಕ ನೃತ್ಯ ನಿರ್ದೇಶಕ ಧನಂಜಯ್ ಅಲಿಯಾಸ್ ಧನು ಮಾಸ್ಟರ್ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಗರಡಿಯಲ್ಲಿ ಪಳಗಿರುವ ಮತ್ತು ಹಲವು ಚಿತ್ರಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿರುವ ಧನು ಮಾಸ್ಟರ್ ಅವರಿಗೆ ಇದು ನಿರ್ದೇಶಕರಾಗಿ ಇದು ಮೊದಲ ಚಿತ್ರ.
ಟಿ.ಜಿ. ವಿಶ್ವಪ್ರಸಾದ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಫೆಬ್ರವರಿಯಲ್ಲಿ ಸೆಟ್ಟೇರುವ ಸಾಧ್ಯತೆ ಇದೆ. ಸದ್ಯ ಗಣೇಶ್, ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಎಂಬ ಚಿತ್ರದಲ್ಲಿ ತೊಡಗಿಸಿಕೊಂಡಿದ್ದು, ಆ ಚಿತ್ರದ ಚಿತ್ರೀಕರಣ ಮುಗಿದ ನಂತರ, ಈ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ.